ಶಿವರಾತ್ರಿ ಮಹಿಮೆ: ಪಾರ್ವತಿ ತಪಸ್ಸು, ಹಾಲಾಹಲ ವಿಷ, ದಿವ್ಯ ಲಿಂಗೋದ್ಭವ ಕಥೆ!

ಶಿವರಾತ್ರಿ ಹೆಸರಿನಲ್ಲೆ ಇದೆ ಶಿವನ ರಾತ್ರಿ ಎಂದು, ಇದು ಕೈಲಾಸವಾಸಿ ಶಿವನ ದಿನ. ಶಿವನಾಮ ಸ್ಮರಣೆಯಲ್ಲೇ ಈ ರಾತ್ರಿ ಕಳೆಯುವುದರಿಂದ ಇದನ್ನು ಶಿವರಾತ್ರಿ’ ಎಂದು ಕರೆಯಲಾಗುತ್ತದೆ. ಇದು ಕೈಲಾಸವಾಸಿ ಶಿವನಿಗೆ ಅತ್ಯಂತ ಪ್ರಿಯವಾದ ದಿನ. ಈ ದಿನದಂದು ಭಕ್ತರೆಲ್ಲರೂ ಆ ಪರಮಶಿವನಿಗೆ ಅಭಿಷೇಕ, ಉಪವಾಸ, ಜಾಗರಣೆ ಹಾಗೂ ಶಿವಭಜನೆ ಮಾಡುವ ಮೂಲಕ ಆ ನೀಲಕಂಠನ ಭಕ್ತಿಗೆ ಪಾತ್ರರಾಗುತ್ತಾರೆ. ಆದರೆ ಈ ದಿನವನ್ನೇ ಶಿವರಾತ್ರಿಯಾಗಿ ಏಕೆ ಆಚರಿಸುತ್ತೇವೆ ಗೊತ್ತಾ?

ಪಾರ್ವತಿ ಮತ್ತು ಶಿವನ ವಿವಾಹ

ಪಾರ್ವತಿಯು ಆ ಪರಮಶಿವನನ್ನು ವರಿಸಿದ ದಿನವೇ ಶಿವರಾತ್ರಿ. ಹಿಮವಂತನ ಮಗಳಾದ ಪಾರ್ವತಿ ದೇವಿಯು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿ, ಈ ದಿನದಂದು  ರಾತ್ರಿಯಿಡೀ  ಶಿವನಾಮ ಜಪಿಸುತ್ತಾ, ತಪಸ್ಸು ಮಾಡಿ ಶಿವನನ್ನು ವಿವಾಹವಾದರೆಂಬ ಉಲ್ಲೇಖವು ಶಿವಪುರಾಣದಲ್ಲಿದೆ.

ಸಮುದ್ರ ಮಂಥನ ಮತ್ತು ವಿಷಪಾನ

ದೇವತೆಗಳು ಹಾಗೂ ಅಸುರರ ನಡುವೆ ಅಮೃತ ಪಡೆಯಲು ಸಮುದ್ರ ಮಂಥನ’ ನಡೆಯುತ್ತದೆ. ಅಮೃತಕ್ಕಿಂತ ಮೊದಲು ಹಾಲಾಹಲವೆಂಬ ಭಯಂಕರ ವಿಷ ಉದ್ಭವವಾದಾಗ, ಲೋಕ ಕಲ್ಯಾಣಕ್ಕಾಗಿ ಶಿವನು ಅದನ್ನು ಕುಡಿಯುತ್ತಾನೆ. ಆ ವಿಷವು ಗಂಟಲಿಂದ ಕೆಳಗೆ ಇಳಿಯದಂತೆ ಪಾರ್ವತಿ ದೇವಿಯು ಶಿವನ ಕುತ್ತಿಗೆಯನ್ನು ಹಿಡಿದು ತಡೆ ಹಿಡಿಯುತ್ತಾಳೆ. ವಿಷದ ಪ್ರಭಾವದಿಂದ ಶಿವನು ನಿದ್ರಿಸಿದರೆ ಅದು ದೇಹದಾದ್ಯಂತ ಹರಡಬಹುದೆಂಬ ಭಯದಿಂದ, ದೇವತೆಗಳೆಲ್ಲರೂ ಆ ರಾತ್ರಿ ಶಿವನು ಎಚ್ಚರವಾಗಿರುವಂತೆ ಭಜನೆ ಮತ್ತು ನೃತ್ಯಗಳನ್ನು ಮಾಡುತ್ತಾರೆ. ಆ ರಾತ್ರಿಯೇ ಶಿವರಾತ್ರಿ. ಹಾಗಾಗಿಯೇ ಭಕ್ತರು ಈ ದಿನದಂದು ರಾತ್ರಿಯಿಡೀ ಎಚ್ಚರವಿದ್ದು (ಜಾಗರಣೆ), ಶಿವನ ಸ್ಮರಣೆ ಮಾಡುತ್ತಾರೆ.

ಲಿಂಗೋದ್ಭವ ಮೂರ್ತಿ

ಇದು ಶಿವನು ಲಿಂಗರೂಪಿಯಾಗಿ ದರ್ಶನ ಕೊಟ್ಟ ದಿನವೂ ಹೌದು. ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ‘ಯಾರು ಶ್ರೇಷ್ಠ?’ ಎಂಬ ಜಗಳ ಉಂಟಾದಾಗ, ಅದನ್ನು ಬಗೆಹರಿಸಲು ಶಿವನು ಒಂದು ಬೃಹತ್ ಅಗ್ನಿ ಸ್ತಂಭದ ರೂಪದಲ್ಲಿ ಅವತರಿಸುತ್ತಾನೆ. ಆ ಅಗ್ನಿ ಸ್ತಂಭದ ಆದಿ (ಆರಂಭ) ಮತ್ತು ಅಂತ್ಯವನ್ನು (ಕೊನೆ) ಕಂಡುಹಿಡಿಯುವಂತೆ ಬ್ರಹ್ಮ-ವಿಷ್ಣುವಿಗೆ ಸೂಚಿಸುತ್ತಾನೆ. ಇದರ ಮೂಲಕ ಶಿವನು ತನ್ನ ಪರಮ ಶಕ್ತಿಯನ್ನು ಲಿಂಗರೂಪದಲ್ಲಿ ದರ್ಶನ ನೀಡಿದನು ಎಂಬುದು ಪ್ರತೀತಿ.

Leave a Comment

Your email address will not be published. Required fields are marked *

Scroll to Top