ಮಹಿಳೆಯರಿಗೆ ಗೌರವ ಸಲ್ಲಿಸೋದಕ್ಕೆ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.

ಮನೆ ಬೆಳಗಲು ದೀಪ ಬೇಕು ಎನ್ನುತ್ತಾರೆ, ಆದರೆ ಆ ದೀಪ ಬೆಳಗಲು ತನ್ನನ್ನೇ ಎಣ್ಣೆ-ಬತ್ತಿಯಾಗಿ ಸವೆಸುವ ಅದಮ್ಯ ಚೇತನವೇ ಹೆಣ್ಣು. ಅವಳು ಕೇವಲ ಪಾತ್ರಗಳಲ್ಲಲ್ಲ, ಬದಲಿಗೆ ಆ ಪ್ರತಿ ಪಾತ್ರಕ್ಕೂ ಜೀವ ತುಂಬುವ ಪ್ರಾಣಶಕ್ತಿ. ಅವಳು ಹುಟ್ಟಿದಾಗ ‘ಮಗಳು‘, ಬೆಳೆದಾಗ ‘ಸಹೋದರಿ‘, ಅಡಿಯಿಟ್ಟಾಗ ‘ಮನೆಮಗಳು‘, ಜೀವನ ಹಂಚಿಕೊಂಡಾಗ ‘ಹೆಂಡತಿ‘, ಕೊನೆಗೆ ಜಗತ್ತನ್ನೇ ಸಲಹುವ ‘ತಾಯಿ‘. ಅವಳ ಪಾತ್ರಗಳು ಬದಲಾಗಬಹುದು, ಆದರೆ ಅವಳ ಪ್ರೀತಿಯ ಆಳ ಮಾತ್ರ ಎಂದಿಗೂ ಬದಲಾಗಲ್ಲ.”

 ಲೋಕದ ದೃಷ್ಟಿಯಲ್ಲಿ ಅವಳು ಅಬಲೆಯಾಗಿ ಕಾಣಿಸಬಹುದು, ಆದರೆ ಜವಾಬ್ದಾರಿಯ ಬೆಟ್ಟ ಹೆಗಲೇರಿದಾಗ ಅವಳು ತೋರುವ ಸ್ಥೈರ್ಯಕ್ಕೆ ಸಾಟಿಯೇ ಇಲ್ಲ. ಅವಳ ಮೌನ ಸೋಲಲ್ಲ, ಅದು ಅವಳ ಸಹನಾ ಶಕ್ತಿಯ ಸಾಕ್ಷಿ. ಕಣ್ಣೀರು ಸುರಿಸಿದರೂ ಮುರಿಯದ ಮನಸ್ಸು ಅವಳದು. ದಣಿದರೂ ಗುರಿ ತಲುಪುವವರೆಗೂ ನಿಲ್ಲದ ಹಠ ಅವಳದು. ಎದೆಯೊಳಗೆ ನೋವಿನ ಸಮುದ್ರವಿದ್ದರೂ, ಮುಖದಲ್ಲಿ ಮಂದಹಾಸ ಧರಿಸಿ ಇಡೀ ಮನೆಗೆ ಶಾಂತಿ ನೀಡುವ ಮಾಂತ್ರಿಕತೆ ಅವಳಿಗೆ ಮಾತ್ರ ಸಾಧ್ಯ. ಅವಳು ಕನಸು ಕಾಣುತ್ತಾಳೆ — ಆದರೆ ಮೊದಲು ಇತರರ ಕನಸುಗಳನ್ನು ಸಾಕಾರಗೊಳಿಸುತ್ತಾಳೆ. ಮನೆ ಇಟ್ಟಿಗೆ-ಮಣ್ಣಿನಿಂದ ಕೂಡಿರಬಹುದು, ಆದರೆ ಆ ಮನೆಗೊಂದು ‘ಮನೆತನ’ದ ಘನತೆ ನಿರ್ಮಾಣವಾಗುವುದು ಹೆಣ್ಣಿನ ಹೃದಯದಿಂದ ಅವಳ ಸಂಸ್ಕಾರದಿಂದ. ಹೆಣ್ಣು ಕೇವಲ ಒಂದು ವ್ಯಕ್ತಿಯಲ್ಲ, ಅವಳೊಂದು ಭಾವನೆ; ಬದುಕಿನ ಅಡಿಪಾಯ. ಅವಳು ಜೀವನದ ಕೇವಲ ಒಂದು ಭಾಗವಲ್ಲ, ಅವಳೇ ಬದುಕಿನ ಪೂರ್ಣ ಶಕ್ತಿ. ಸೃಷ್ಟಿಯ ಮೂಲವೇ ಅವಳು!”

ಇಂತಾ ಒಂದು ಶಕ್ತಿಗೆ ಗೌರವ ಸಲ್ಲಿಸೋದಕ್ಕೆ ಅಂತಾನೆ ಮಾರ್ಚ್ 8 ಅಂರ್ತರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲಾಗತ್ತೆ .

ಪ್ರತಿ ವರ್ಷ ಮಾರ್ಚ್ 8ರಂದು ನಾವು ಆಚರಿಸುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿಂದೆ ದೊಡ್ಡ ಹೋರಾಟದ ಇತಿಹಾಸವೇ ಇದೆ. 1910 ರಲ್ಲಿ ಕ್ಲಾರಾ ಜೆಟ್ಕಿನ್ ಅವರ ಪ್ರಸ್ತಾವನೆಯೊಂದಿಗೆ ಆರಂಭವಾದ ಈ ಪಯಣ, 1911 ರಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ಲಕ್ಷಾಂತರ ಮಹಿಳೆಯರ ಹಕ್ಕುಗಳಿಗಾಗಿ ನಡೆದ ರ್ಯಾಲಿಯ ಮೂಲಕ ಜಗತ್ತಿಗೆ ಪರಿಚಯವಾಯಿತು. ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮೊದಲು ಮಾರ್ಚ್ 19, 1911 ರಂದು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆಚರಿಸಲಾಯಿತು,  ಭಾರತದಲ್ಲೂ 1914ರ ಸುಮಾರಿಗೆ ಪುಣೆಯಲ್ಲಿ ಮೊದಲ ಸಭೆಗಳು ನಡೆದು, ನಂತರ ಸ್ವಾತಂತ್ರ್ಯ ಚಳವಳಿಯೊಂದಿಗೆ ಮಹಿಳೆಯರ ಧ್ವನಿ ಬಲವಾಯಿತು. 1975ರಲ್ಲಿ ವಿಶ್ವಸಂಸ್ಥೆಯು ಇದನ್ನು ಅಧಿಕೃತವಾಗಿ ಗುರುತಿಸಿತು. ಈ ದಿನವು ಕೇವಲ ಆಚರಣೆಯಲ್ಲ, ಅದು ಹೆಣ್ಣಿನ ಸಮಾನತೆ ಮತ್ತು ಸಾಧನೆಯ ಸಂಕೇತ.

“I am proud to be a Woman. Happy women’s day all

Leave a Comment

Your email address will not be published. Required fields are marked *

Scroll to Top